Friday 9 September 2011

ಗೂಡಾರ್ಥದ ಹಂಗೇಕೆ ನಮ್ಮ ಹಾಡಿಗೆ ?


ಕವಿತೆ ಸರಳರೇಖೆಯಂತಿರಬಾರದು
ನೂರು ಗೂಡಾರ್ಥಗಳ ಸೃಷ್ಟಿಸಿ
ಭಾವಗಳ ಅಬ್ಬರದಲ್ಲಿ ನೋವುಗಳ ಲಘುವಾಗಿಸಿ
ಸುಲಭಕ್ಕೆ ಅರ್ಥವಾಗಬಾರದು

ಅದರ ವಿನ್ಯಾಸ ,ಲಯ ,ವಿಸ್ತಾರಗಳೆಲ್ಲವೂ
ಕಣ್ಣಿಗೆ ಕಾಣುವ,ಕೈಗೆ ಸಿಗದ
ಕನ್ನಡಿಯೊಳಗಿನ ಗಂಟಿನಂತಿರಬೇಕು

ಹಾಗಂತ ಮೊನ್ನೆ ಕಾವ್ಯವನ್ನು
ಅರೆದು ಕುಡಿದಿರುವ ಪ್ರಕಾಂಡ ಪಂಡಿತರು
ಮೂರು ಮುಕ್ಕಾಲು ಜನ ಸೇರಿದ್ದ
ಸೆಮಿನಾರು ಒಂದರಲ್ಲಿ ಮಾತನಾದಿಕೊಂದರಂತೆ
ರದ್ದಿ ಆಯುವವನು ,ಮಾಂಸ ಮಾರುವವನು
ಮಿಟಾಯಿ ಅಂಗಡಿಯಲ್ಲಿ ನೊಣ ಹೊಡೆಯುವವನು
ಕವಿತೆಯ ಬಗ್ಗೆ ,ಅದರ ಸಾಚಾತನದ ಬಗ್ಗೆ
ಮಾತಿಗೆ ನಿಂತರೆ ಕವಿಯ
ಕಿಮ್ಮತ್ತೆನಾಗಬೇಕೆಂಬುದು
ಅವರ ಆತಂಕವಂತೆ ..
ಹೂವು, ಚಂದ್ರ ,ಬೆಳದಿಂಗಳು ಸಮುದ್ರ
ಮುಂತಾದ ಸುಂದರ ರೂಪಕಗಳ ಮುಂದೆ
ಕೊಚ್ಚಿ ಹೋದ ಬದುಕು,ಮಣ್ಣಿನಡಿಯಲ್ಲಿ ಕೊಳೆತ ದೇಹ
ಹಸಿವಿನ ಸಂಕಟ ,ಮತ್ತು ಸಾಲಕ್ಕೆ ಸತ್ತವನ
ವಿರೂಪ ಚಿತ್ರಗಳನ್ನು ಯಾರಾದರೂ
ಕಾವ್ಯಾವಾಗಿಸುತ್ತಾರೆನ್ರೀ ಎಂದು ತೂಕಡಿಸುತ್ತಿದ್ದ
ಸಭಿಕರ ಮುಂದೆ ಕಿಡಿ ಕಾರಿದರಂತೆ !

ಹಾಳಾಗಿ ಹೋಗಲಿ ಬಿಡಿ
ಟಿ ಎ ಡಿ ಎ ಸೌಖ್ಯದಲಿ
ಅಕಾದೆಮಿಗಳೆಂಬ ಹಾಳು ಕೊಂಪೆಯಲಿ
ಸ್ವರತಿ ಸುಖದಲಿ ಮೈಮರೆತ
ಸಜ್ಜನರ ಸಹವಾಸ ನಮಗೇಕೆ ?

ನೇಗಿಲಿನ ಪ್ರೀತಿಗೆ ಮಣ್ಣು ಮೃದುವಾಗಿ
ಬೀಜ ತೆನೆಯಾಗಿ ತೊನೆಯುವಂತೆ
ಪದ ಹುಟ್ಟುತಿರಲು ಗೂಢ ನಿಗೂಢಗಳ
ಹಂಗೇಕೆ ನಮ್ಮ ಹಾಡಿಗೆ ,ಇರಲಿ ಬಿಡಿ ಅದರ ಪಾಡಿಗೆ ...

No comments:

Post a Comment