Friday 25 May 2012

ಪ್ರೇಮ ಮತ್ತು ಹಸಿವು ಮಾತ್ರ ಮನುಷ್ಯನನ್ನು ಜೀವಂತಿಕೆಯಿಂದ ಇಡಬಲ್ಲವು.
ಮಳೆಯೆಂದರೆ
ಅವಳ ನೆನಪು
ಕಣ್ಣ ಹೊಳಪು
ಮೈಯ ಒನಪು
ಕಿಬ್ಬೊಟ್ಟೆ ಯಾಳದಲಿ
ಸಣ್ಣಗೆ ಕದಲುವ ನೋವು

ಮಳೆಯೆಂದರೆ

ಅರಳುವ ಆಸೆ
ಕೆರಳುವ ಕಾಮ
ಹರಿಯುವ ಬೆವರು
ಸುರಿದುಕೊಳ್ಳುವ ಸುಖ

ಮಳೆಯೆಂದರೆ

ಸುದೀರ್ಘ ರಾತ್ರಿ
ದಣಿಯದ ದೇಹ
ಮುಗಿಯದ ಕನಸು
ಪರವಶ ಮನಸು

ಮಳೆಯೆಂದರೆ

ಚಿಕ್ಕದೊಂದು ಸೋಲು
ಬಹು ದೊಡ್ಡ ಗೆಲುವು
ಅತೃಪ್ತ ಆಕಾಂಕ್ಷೆ
ಯುದ್ದ ಗೆದ್ದ ಅಹಂಕಾರ ....

ಮತ್ತು ಮಳೆಯೆಂದರೆ

ಅವಳ ತಿರುವುಗಳು
ಮತ್ತದೇ ಸೆಳವುಗಳು
ಹಸಿ ಹಸಿ ಬಯಕೆಗಳು
ಬಿಸಿ ಬಿಸಿ ನೆನಪುಗಳು

ಏಕಾಂತವನ್ನು
ಕೆಣಕುವ
ನಿನ್ನ ಹಲ್ಕಟ್ಟ ನಗೆಗೆ
ನನ್ನ ಅಂಗಾಂಗಗಳೆಲ್ಲ
ಪುಳಕಗೊಂಡಿವೆ
ನಾಳೆಗಿರಲಿ ಎಂದು
ಎತ್ತಿಟ್ಟುಕೊಂಡ ನನ್ನ
ಕೆಲವು ಕನಸುಗಳು
ಬದುಕು ಸಿಂಗಾರಗೊಂಡ
ಸಂಭ್ರಮದಲ್ಲಿ ಮರೆತೇ ಹೋಗಿವೆ
ನಿಸ್ತೇಜ ಕಣ್ಣುಗಳಲ್ಲಿ , ನಿಶಾಚರ ರಾತ್ರಿಗಳಲ್ಲಿ
ಸಿಕ್ಕು ,ಬಿಕ್ಕುವ ಏಕಾಂತದಲ್ಲಿ
ಗೆಳೆಯನಂತೆ ಆತುಕೊಂಡ
ಜೀವನ್ಮುಖಿ ಕನಸುಗಳು
ಸುಖದ ಕನವರಿಕೆಯಲಿ
ಕಳೆದೆ ಹೋಗಿವೆ
ಅಲ್ಲಲ್ಲಿ ಬಿದ್ದು ಇನ್ನೆಲ್ಲೋ ಎದ್ದು
ಒಂದಿಷ್ಟು ಪಡೆದು ,ಒಂದಿಷ್ಟು ಕಳೆದು
ನಿರ್ಲಿಪ್ತವಾಗುವ ಮುನ್ನ ಮನಸು
ಕೈ ಹಿಡಿದು ಕಾಪಾಡಿದ ಕನಸುಗಳು
ಮಾತಿಲ್ಲದೆ ಮರೆಯಾಗಿವೆ