Wednesday 11 July 2012

ಎಲ್ಲ ನೋವಿಗೂ 
ಕಾಲವೇ ಔಷದ 
ಎಂಬ ಮಾತಿನಲ್ಲಿ ನನಗೆ ವಿಪರೀತ ನಂಬಿಕೆ 
ಹಾಗಾಗಿಯೇ ನಾನು ಮತ್ತೆ ಮತ್ತೆ 
ನಿನ್ನ ಬಳಿಗೆ ಬರುತ್ತೇನೆ 
ನೀನೋ ಮತ್ತದೇ ಅಸಹನೆಯ ಚಾದರ ಹೊದ್ದು 
ನನ್ನಾತ್ಮದ ಅಣು ಅಣುವಿಗೂ 
ಅವಮಾನದ ಪರದೆ ಹೊದಿಸಿ, ಗೆದ್ದೆನೆಂದು ಬೀಗುತಿ 
ಇರಲಿ ,ಇಂಚಿಂಚೆ ನಿನ್ನತನವನ್ನ ಕೊಂದ 
ನನ್ನ ಅಹಮ್ಮಿಗೆ ,ನನ್ನ ಕ್ರೌರ್ಯಕ್ಕೆ 
ನೀನಿತ್ತ ಮೊದಲ ಉತ್ತರ ಎಂದರೂ ಸರಿಯೇ
ಒಪ್ಪಿಕೊಳ್ಳುತ್ತೇನೆ
ನಿನ್ನಾತ್ಮ ಸಖ ನಾನು ,ಸುಖದ ನೆನಪುಗಳನ್ನಷ್ಟೇ
ನಾಳೆಯ ಕನಸಾಗಿಸಿಕೊಂಡರೆ ಮತ್ತೊಮ್ಮೆ ನಿನಗೆ
ಪ್ರಿಯವಾಗಲಾರೆನೆ ?
ನಿನ್ನಲ್ಲಿ ಮೂಡಿದ ನನ್ನ ಗುರುತುಗಳಿಗೆ
ಒಮ್ಮೆಯಾದರೂ ನಾನು ನೆನಪಾಗಲಾರೆನೆ
ನನ್ನ ದೇಹದ ಕಸುವನ್ನು ಇಷ್ಟಿಷ್ಟೇ ಕಸಿದುಕೊಂಡ
ಋಣಕ್ಕಾದರೂ ನಾನು ಇನ್ನಷ್ಟು ಆಪ್ತವಾಗಲಾರೆನೆ
ಬಿಡು ,ಏನೂ ಹೇಳದ,ನೀನು ಕೇಳದ ಖಾಲಿ ಮಾತೇಕೆ
ಎಲ್ಲವನು ಕ್ಷಮಿಸಿ ಸುಮ್ಮನೊಮ್ಮೆ ನೋಡಿಬಿಡು
ನನ್ನ ಗುರುವೂ ,ವರವೂ ಆದ ಕಾಲವನ್ನೇ
ಸಾಕ್ಷಿಯನ್ನಾಗಿಸಿ ನಿನಗೆ ಮಾತು ನೀಡುತ್ತೇನೆ
ನನ್ನೊಳಗಿನ ವಿಕಾರಗಳ ಸುಟ್ಟು ,
ಪ್ರೀತಿಯ ಗಿಡ ನೆಟ್ಟು ,ಅಂತಃ ಕರಣದ ಹೂ ಬಿಟ್ಟು
ಘಮ ಘಮಿಸುವಂತೆ ಅಂತರಂಗವನ್ನು ಅಣಿ ಮಾಡಿಕೊಳ್ಳುತ್ತೇನೆ
ಇನ್ನು ಕೇವಲ ಪ್ರೀತಿಸುತ್ತೇನೆ ,
ನನ್ನನ್ನು, ನನ್ನ ಬದುಕಾದ ನಿನ್ನನ್ನು .
ನಾನು ನಿನ್ನ ನೋಡಿ 
ನೀನು ನನ್ನ ನೋಡಿ 
ಕಣ್ಣಲ್ಲೇ ಮಾಡಿ ಮೋಡಿ
ಅಳೆದು ತೂಗಿ 
ಪ್ರೀತಿ ಮಾಗಿ 
ಜೊತೆಯಲ್ಲೇ ಉಂಡೆವು 
ಬೆವರಲ್ಲಿ ಮಿಂದೆವು 
ಈಗ 
ಪ್ರೀತಿಯೂ ಹೊರೆ 
ಇಳಿಸಿಕೊಳ್ಳುವ ಹಂಬಲ ನಿನಗೆ 
ಕಳಚಿಕೊಂಡರೆ ಸಾಕೆನಗೆ