Saturday 17 September 2011

ಹುಡುಗಿ

ಮೊನ್ನೆ ಸಂಕ್ರಾತಿ ಹಬ್ಬದ ದಿನ ಗವಿ ಗಂಗಾಧರೇಶ್ವರ ದೇವಸ್ಥಾನದ ಅಂಗಳದಲ್ಲಿ ನಿಂತು ಗಾಳಿಗೆ ಹಾರಿ ಹಾರಿ ನಿನ್ನ ಕೆನ್ನೆಗೆ ಮುತ್ತಿಕ್ಕುತ್ತಿದ್ದ ಕೂದಲನ್ನು ಪದೇ ಪದೇ 
ಹಿಂದಕ್ಕೆ ಸರಿಸುತ್ತಿದ್ದಾಗಲೇ ನಿನ್ನನ್ನು ನಾನು ನೋಡಿದ್ದು .ಮರುಕ್ಷಣವೇ ನನ್ನ ಮನಸಿನ ಮನೆಯ ತುಂಬೆಲ್ಲ ಒಲವ ಶ್ರಾವಣದ ಸಂಭ್ರಮ ಶುರುವಾಗಿ ಹೋಗಿತ್ತು .
 ಹನುಮಂತನ ಬಾಲದಂತಿದ್ದ ಕ್ಯೂ ಬಿಸಿಲಲ್ಲಿ ಬೆವರಿಳಿಸುತ್ತಿದ್ದರೆ ದೇವರ ದರ್ಶನ ಬೇಡ ಎನಿಸುತ್ತಿತ್ತು .ಇನ್ನೊಂದಿಷ್ಟು ಹೊತ್ತು ನೋಡಿ ಮನೆಗೆ ಹೊರಟು ಬಿಡೋಣ
ಅಂದುಕೊಳ್ಳುತ್ತಿದ್ದವನ ಮುಂದೆ ಜಗತ್ತಿನ ಸೌಂದರ್ಯವೆಲ್ಲ ಹೆಣ್ಣಾಗಿ ರೂಪ ಪಡೆದಿದೆಯೇನೋ ಎಂಬಂತೆ ನೀನು ಕಾಣಿಸಿಕೊಂಡೆ , ಆಮೇಲೆ ನಾನು ನಾನಾಗಿ ಉಳಿಯಲಿಲ್ಲ .ಗರಿಗೆದರಿದ
ಹಕ್ಕಿಯಂತಾಗಿ ಹೋಗಿದ್ದ ಮನಸಿನಲ್ಲಿ ನಿನ್ನ ಬಗೆಗಿನ ನೂರು ಭಾವನೆಗಳ ಸಂಕಲನ ,ಖಾಲಿ ಇದ್ದ ಎದೆಯ ತುಂಬಾ ಸಿಹಿ ಸಿಹಿ ಕನಸುಗಳ ವರ್ಣ ಸಂಕ್ರಮಣ .
ತುಸು ತುಸುವೇ ಕಮ್ಮಿಯಾಗುತ್ತಿದ್ದ ಕ್ಯೂ ಬ್ರೆಗನೆ ಮುಗಿದು ಹೋಗುವುದೇನೋ ಎಂಬ ಬೇಸರದಲ್ಲಿ ನಿನ್ನನ್ನು
ದಿಟ್ಟಿಸುತ್ತಿದ್ದ ನನ್ನನ್ನು ಒಮ್ಮೆ ನೋಡಿದೆಯಲ್ಲ  ! ನಿಜ ಹೇಳಲಾ ಹುಡುಗಿ
ಸಾವಿರ ಕೋಲ್ಮಿಂಚು ಒಮ್ಮೆಗೆ ಹೊಡೆದಂತಾಯ್ತು .
ಅಮಾವಾಸ್ಯೆಯ ಕತ್ತಲಲ್ಲಿ ಬೆಳದಿಂಗಳು ಸುರಿದಂತೆ ನಿನ್ನ ನಗುವಿಗೆ ಯಾರನ್ನು ಬೇಕಾದರೂ ಮೋಡಿ ಮಾಡಿ ಚಿತ್ತಾಗಿಸುವ ಶಕ್ತಿಯಿದೆ ಅನ್ನಿಸುತ್ತಿತ್ತು ,ಆದರೆ ಬೇರೆ ಯಾರು  ಆ ನಗುವಿಗೆ ತುತ್ತಾಗದಿರಲಿ ಎಂದು ಮನಸ್ಸು ದೇವರಲ್ಲಿ ಬೇಡಿಕೊಳ್ಳುತ್ತಿತ್ತು .ದೇವರ ದರ್ಶನ ಮುಗಿಸಿಕೊಂಡು ಹೊರಬಂದವನ ಕಣ್ಣುಗಳು ನಿನ್ನ ಅರಸುತ್ತಿದ್ದರೆ ನೀನಾಗಲೇ ನಿನ್ನ ನೀಲಿ ನೀಲಿ ಸ್ಕೂಟಿಯ ಕಿವಿ ಹಿಂಡುತ್ತಿದ್ದೆ.ಕಣ್ಮುಚ್ಚಿ ತೆರೆಯುವಷ್ಟರಲ್ಲಿ ನಾನು ನಿನ್ನ ಎದುರಿಗಿದ್ದೆ ,ಗಾಬರಿಯಾದ ನಿನ್ನ ಕಂಗಳಲ್ಲಿ ಯಾರೀತ ಎಂಬ ಆತಂಕ ಪ್ರತಿಫಲಿಸುತ್ತಿತ್ತು .ಒಂದೇ ಉಸಿರಿನಲ್ಲಿ ನನ್ನ ಪರಿಚಯ ,ಊರು ,ಕೆಲಸ ,ಅಭ್ಯಾಸ, ಹವ್ಯಾಸ ಎಲ್ಲವನ್ನು ಹೇಳಿಕೊಂಡೆ .ಕಣ್ಣು ಮಿಟುಕಿಸದೆ ಕೇಳಿಸಿಕೊಂಡ ನೀನು' ಓಕೆ  ' ಆದರೆ ಇದನ್ನೆಲ್ಲಾ ನನ್ನ
ಹತ್ತಿರ ಯಾಕೆ ಹೇಳುತ್ತಿದ್ದೀರಾ? ಅಂತಂದೆ .
ಮಾಮರ ಚಿಗುರಿದ ಸಂಭ್ರಮದಲ್ಲಿ ಕೋಗಿಲೆಯೊಂದು ಖುಷಿಯಿಂದ ಮಾತನಾಡಿದಂತಿತ್ತು ನಿನ್ನ ದನಿ.ಇನ್ನೇನು ಹೊರಡಬೇಕೆಂಬ ಅವಸರದಲ್ಲಿದ್ದ ನಿನಗೆ ಕೈಗೆ ಸಿಕ್ಕ ಹಾಳೆಯ ಚೂರೊಂದರಲ್ಲಿ ನನ್ನ ಮೊಬೈಲ್ ನಂ ಬರೆದು ದಯವಿಟ್ಟು ಕರೆ ಮಾಡಿ ,ನಿಮ್ಮ ಕಾಲ್ ಗಾಗಿ ಕಾಯುತ್ತಿರುತ್ತೇನೆ ಅಂತ್ಹೇಳಿ ಹಾಳೆಯ ಚೂರನ್ನು ನಿನ್ನ ಕೈಗಿಟ್ಟೆ.ಬಹುಶ ನನ್ನನ್ನು ನೀನು ಎಲ್ಲೋ ತಲೆ ಕೆಟ್ಟವನಿರಬೇಕು ಎಂದು
ಕೊಂಡಿರಬೇಕು . ನಿಜ ನಂಗೆ ತಲೆ ಕೆಟ್ಟಿರಲಿಲ್ಲ,ಮನಸು ಕೆಟ್ಟಿತ್ತು ,ಅದು ನೀನೆ ಬೇಕು ಎಂದು ತೀರ್ಮಾನಿಸಿಯಾಗಿತ್ತು .
ನೀನು ಕಾಲ್ ಮಾಡೇ ಮಾಡ್ತಿಯ ಅಂತ ನನ್ನ ಮನಸು ಹೇಳುತ್ತಿತ್ತು,ಅಥವಾ ಹಾಗೆನಿಸುತ್ತಿತ್ತು .ಕ್ಷಣಗಳು ದಿನವಾದಂತೆ ,ದಿನಗಳು ಯುಗವಾದಂತೆ ಭಾಸವಾಗುತಿತ್ತು .ನಿನ್ನ ಪ್ರೀತಿಯ ಕರೆಗಾಗಿ ಕಾದು ಕಾದು ಸೀದುಹೋದೆ ಗೆಳತಿ ,ರಾಮನಿಗೆ ಶಬರಿ ಕಾದಂತೆ .ಅಲ್ಲಿ ಶಬರಿಗೆ ರಾಮ ಬರುವನೆಂಬ ನಂಬಿಕೆಯಾದರು ಇತ್ತು ,ಆದರೆ ಅಂತ ನೀರಿಕ್ಷೆಗಳು ನಿನ್ನ ಬಗ್ಗೆಯೂ ಇತ್ತ ? ಇಲ್ಲ ಖಂಡಿತ ಇರಲಿಲ್ಲ .ಆಗಷ್ಟೆ ನೋಡಿ ,ಕ್ಷಣದಲ್ಲಿ ಪ್ರೀತಿ ಹುಟ್ಟಿ ತಕ್ಷಣವೇ ಮೊಬೈಲ್ ನಂ  ಕೊಟ್ಟು ಕರೆ ಮಾಡಿ ಅಂದವನ ಮನಸ್ಥಿತಿ  ನೋಡಿ ನೀನು ಕೇವಲ ನಕ್ಕಿರಬೇಕು ,ಕೊನೆ ಕೊನೆಗೆ ನನಗೆ ಹಾಗೆನಿಸುತ್ತಿತ್ತು .ಆದರೆ ಹುಡುಗಿ ಪ್ರೀತಿಗೆ ಮಾತ್ರ ಇಂಥ ಹುಚ್ಹುಗಳಿರುತ್ತವೆ ಎಂದು ನಂಬಿದವನು ನಾನು .ನನ್ನ ಪಾಲಿಗೆ ನೀನೆಂಬುದು ಇನ್ನು ಕನಸು ಅಂದುಕೊಂಡು ನಿರಾಳವಾಗುತ್ತಿದ್ದವನ ಮನಸು ಮತ್ತೆ ನವಿಲಿನಂತಾಗಿದ್ದು  ನಿನ್ನ ಮೊದಲ ಮೆಸೇಜ್ ಬಂದಾಗ ," ಹೇಗಿದ್ದೀರಿ" ಎಂಬ ಮೆಸೇಜ್ ನೋಡಿ ಅದು ನಿನ್ನದೇ ಇರಬಹುದೇ ಎಂಬ ಆಸೆಯಲ್ಲಿ" ಚನ್ನಾಗಿದ್ದೇನೆ ,ನೀವು ಯಾರು "? ಎಂಬ ನನ್ನ ಪ್ರಶ್ನೆಗೆ  ಆ ಕಡೆಯಿಂದ ಬಂದ ಉತ್ತರ "ಗೆಸ್ಸ್ ಮಾಡಿ ಫ್ರೆಂಡ್ "
ಅದನ್ನು ನೋಡಿದ ಮೇಲೆ ಅದು ನಿನ್ನದೇ ಎಂದು ಗೊತ್ತಾಗಿ ಹೋಯ್ತು .ಆದರೆ ಅದನ್ನು ಹೇಳಿಕೊಳ್ಳದೆ ಪರಸ್ಪರ ತರಲೆ,ಹುಸಿಕೋಪ ,ಎಲ್ಲವು ವಿನಿಮಯವಾಯ್ತು .ಪರಿಚಯದಿಂದ ಸಲುಗೆ ಬೆಳೆಯಿತು .ಸಲುಗೆ ನಮ್ಮಿಬ್ಬರನ್ನು ಮತ್ತೊಮ್ಮೆ ಮುಖಾಮುಖಿಯಾಗಿಸಿತು .ಆಡಿದ ಮಾತುಗಳಿಗೆ ,ಕೇಳಿಸಿಕೊಂಡ ಜೋಕುಗಳಿಗೆ,  ಹಿತವಾಗಿ ಕಾಡಿದ ಹಾಡುಗಳಿಗೆ
ಇಬ್ಬರು ಮನಸಾರೆ ಸೆರೆಯಾದೆವು.ಗಾಂಧಿ ಬಜಾರಿನ ರಸ್ತೆಗಳು ,ಆಶ್ರಮದ ಕಲ್ಲು ಬೆಂಚುಗಳು ,ಎಸ್ ಎಲ್ ವಿ  ಹೋಟೆಲ್ಲಿನ ಟೇಬಲ್ಲುಗಳು ನಮ್ಮ ಓಡಾಟ ,ಒಡನಾಟಕ್ಕೆ
ಸಾಕ್ಷಿಯಾದವು .ಆದರು ನಾವು ಒಬ್ಬರಿಗೊಬ್ಬರು ಇಷ್ಟ ಅಂತ ಹೇಳಿಕೊಳ್ಳಲೇ ಇಲ್ಲ .ಪ್ರೀತಿಯ ಮಾತು ಝರಿಯಾಗಿ ಹರಿಯಲೇ ಇಲ್ಲ .ಜೀವದ ಗೆಳತಿಯಂತಾಗಿ ಹೋಗಿದ್ದ ನೀನು
ದಿನಕ್ಕೊಂದು ಸಲ ಕರೆ ಮಾಡದಿದ್ದರೆ ,ಗಂಟೆಗೊಂದು ಮೆಸೇಜು ಕಲಿಸದಿದ್ದರೆ ,ವಾರಕ್ಕೆರಡು ಸಲ ಕಾಣಿಸದಿದ್ದರೆ ನನ್ನಲ್ಲೊಂದು ಅವ್ಯಕ್ತ ಭಯ ಶುರುವಾಗುತ್ತಿತ್ತು .ವಿನಾಕಾರಣ
ನೀನು ನನ್ನ ಕೈ ತಪ್ಪಿ ಹೋಗಿ ಬಿಡುವೆಯ ಎಂಬ ಆತಂಕ ನನ್ನನ್ನು ಧಾವಂತಕ್ಕೆ ಈಡು ಮಾಡುತ್ತಿತ್ತು .ನೀನಂದ್ರೆ ನಂಗಿಷ್ಟ ಕಣೇ ಅಂತ ಸಾವಿರ ಸಲ ಹೇಳಲು ಬಂದವನಿಗೆ
ನಿನ್ನ ಮುಖ ನೋಡಿದಾಕ್ಷಣ ನಾಲಿಗೆ ಹೊರಳುತ್ತಿರಲಿಲ್ಲ .ಅಪ್ಯಾಯಮಾನ ಗೆಳೆತನದ ಖುಷಿ ಹಾಳಾಗಿ ಹೋಗಬಹುದೆನ್ನುವ ದಿಗಿಲು ನನ್ನನ್ನು ಮೂಕನನ್ನಾಗಿಸುತ್ತಿತ್ತು ತಿಳಿಯಲಾರದ ತಳಮಳಗಳು ಮತ್ತು ಮನಸಿನ ಬಗೆಹರಿಯದ ದ್ವಂದ್ವಗಳಿಂದ ಹೊಯ್ದಾಡುತ್ತಿದ್ದ ನನ್ನ ಮನಸಿನ ಮಾತು ನಿನಗೆ
ಅರ್ಥವಾಗುತ್ತಿತ್ತಾ ?
ಮೋಡ ಕಟ್ಟಿ ಇನ್ನೇನು ಮಳೆಯಾಗಬಹುದೆಂಬ ವಾತಾವರಣವಿದ್ದ  ಸಂಜೆಯೊಂದರಲ್ಲಿ ಏಕಾಂತವನ್ನು ಎಂಜಾಯ್ ಮಾಡುತ್ತ ನಡೆಯುತ್ತಿದ್ದವನ ಬೆನ್ನ ಹಿಂದಿನಿಂದ " ಐ ಲವ್ ಯು ಕಣೋ ,ನೀನೆ ಹೇಳ್ತಿಯ ಅಂತ ಕಾಯುತ್ತಿದ್ದೆ .ಮನೆಯಲ್ಲಿ ನನ್ನ ಮದುವೆ ಮಾತುಕತೆ ನಡೆಯುತ್ತಿದೆ ,ನಿನ್ನ ಬಿಟ್ಟು ನನ್ನ ಮನಸಿನಲ್ಲಿ ಇನ್ಯಾರಿಗೂ ಜಾಗವಿಲ್ಲ ಕಣೋ
ನಿನಗೂ ನಾನಂದ್ರೆ ಇಷ್ಟ ಅಲ್ವೇನೋ " ? ಅನ್ನುವ  ಮಾತು ಕೇಳಿ ತಿರುಗಿದೆ ,ಇಬ್ಬರ ಕಣ್ಣಲ್ಲೂ ಮಾತಿಗೆ ನಿಲುಕದ ಸಂಭ್ರಮವಿತ್ತು .ಹಾಗೆ ತಬ್ಬಿಕೊಂಡೆ ,ಸುರಿದ ಮಳೆಗೆ ದೇಹ ಮತ್ತು ಮನಸು ತೊಪ್ಪೆಯಾಗಿ ಹೋಯ್ತು .......