Friday 9 September 2011

ಕನಸಿಗೆ ಬಂದವಳು ಮನಸಿಗೆ ಬರಬಾರದೇ ?

ಗೆಳತಿ
     ಗೆಳೆಯರದೆಲ್ಲ ಒಂದೇ ತಕರಾರು .ಭಾನುವಾರದ ಇಳಿಸಂಜೆಯಲಿ,ಬಿಡುವಿಲ್ಲದೆ ಮಾಡುತಿದ್ದ ಮೆಸೇಜುಗಳಲ್ಲಿ ,ಲೋಕಾಭಿರಾಮವಾಗಿ ಹರಟುತ್ತಿದ್ದ ಫೋನಿನಲಿ ಇ
ಡಿಯಾಗಿ ಸಿಗುತ್ತಿದ್ದ ನಾನು  ಇತ್ತೀಚಿಗೆ ಕೈಗೆ ಸಿಗುತ್ತಿಲ್ಲ ಅಂತ ಅವರಲ್ಲಿ ಕೊಂಚ ಗುಮಾನಿ ಬೆರೆತ ಕೋಪ.ನಿಜ ಹೇಳ್ಬೇಕಂದ್ರೆ ಗೆಳೆಯರಿಗಿಂತ ಮೊದಲು ನನಗೆ ಹಾಗೆನಿಸುತ್ತಿದೆ .ನಿದ್ರೆ ಬರದ ಮುಂಜಾವೊಂದರಲ್ಲಿ ಆವರಿಸಿಕೊಂಡ ಸಣ್ಣ ಮಂಪರಿಗೆ ಹಾಗೆ ಜಾರಿದವನ ಕನಸಿಗೆ ನೀನು ಬಂದು ಹೋದ ಮೇಲೆ ನಾನು ನಾನಾಗಿ ಉಳಿದಿಲ್ಲ .
ಶ್ರಾವಣದ ಮೊದಲ ಮಳೆ ಬಿದ್ದ ಮೇಲೆ ಹೊರಡುವ ಮಣ್ಣ ಘಮದಂತೆ ನನ್ನ ಮೈ ಮನಸಿನ ತುಂಬೆಲ್ಲ ನೀನೆ ತುಂಬಿಕೊಂಡ ಮೇಲೆ ಗೆಳೆಯರೆಲ್ಲ ಹೇಳಿದ "ಏನೋ ಆಗಿದೆ ,ನನಗೇನೋ ಆಗಿದೆ " ಅನ್ನುವ ಮಾತು ನಿಜ ಅನ್ನಿಸತೊದಗಿದ್ದು . ಮೊನ್ನೆ ಮೊನ್ನೆ ತಾನೇ ನೀನು ಗಿರಿನಗರದ ವೆಂಕಟರಮಣ ದೇವಸ್ಥಾನದ ತಿರುವಿನಲ್ಲಿ ನನ್ನ ಮುಂದಿನಿಂದ ಹಾದು ಹೋದೆಯಲ್ಲಾ  ? ಆಗಲೇ ಗೊತ್ತಾಗಿದ್ದು ಕನಸಿಗೆ ಬಂದಿದ್ದು ನೀನೆ ಅಂತ . ಅಮೇಲೆನಿದೆ,ಮನಸೆಲ್ಲ ನಿನ್ನಲ್ಲೇ ನೆಲೆಯಾಯಿತು ,ನಿನ್ನ ಅರಸುವುದೇ ಉದ್ಯೋಗವಾಯಿತು . ಇಡೀ ಗಿರಿನಗರದ ಗಲ್ಲಿ ಗಲ್ಲಿಗಳಲ್ಲಿ ,ಶಾಂತಿಸಾಗರ ಹೋಟೆಲಿನ ಗಜಿ ಬಿಜಿಯಲ್ಲಿ ,ಸೀತಾ
ಸರ್ಕಲ್ ನ ಆಸುಪಾಸಿನಲ್ಲಿ ಎಂದಾದರು ಎದುರಾಗಬಹುದೆಂಬ ಆಸೆಯಲಿ ಕಾದು ಕೆಂಡವಾಗುತ್ತಿದ್ದವನ ಜೊತೆ ನನ್ನ ಪ್ರೀತಿಯ  ಪಲ್ಸರ್ ಬಿಟ್ಟರೆ ಇನ್ಯಾರು ಇರಲಿಲ್ಲ .ಪ್ರೀತಿಯಲ್ಲಿ ಬಿದ್ದವರಿಗೆ ಜಗತಿನ ಪರಿವೆ ಇರುವುದಿಲ್ಲ ಎನ್ನುವುದಕ್ಕೆ ನಾನೇ ಸಾಕ್ಷಿಯಾಗಿದ್ದೆ .ನನ್ನಷ್ಟು ಸುಖಿ ಬೇರೆ ಇಲ್ಲ ಎನಿಸುತ್ತಿತ್ತು .ಮನಸು ನಿನ್ನನ್ನು ಹುಡುಕುವ ಖುಷಿಯನ್ನು ಎಂಜಾಯ್ ಮಾಡುತ್ತಿತ್ತು .ಅದು ನೀನೆ ಬೇಕು ಎನ್ನುವ ಹಟಕ್ಕೆ ಬಿದ್ದಿತ್ತು .
ಅದೊಂದು ಸಂಜೆ ಆಗಷ್ಟೆ ಸೂರ್ಯ ಬೆಟ್ಟಗಳ ನಡುವಿನಿಂದ ಮರೆಯಾಗಿ ,ಕತ್ತಲನ್ನು ಸೀಳಿಕೊಂಡು ಚಂದಿರ ನಗುವ ಹೊತ್ತಿಗೆ ಕಂಡು ಕಾಣದಂತ ತುಂತುರು ಮಳೆ ಶುರುವಾಗಿತ್ತು .ಗೆಳೆಯನೊಬ್ಬನ ಮೊಬೈಲ್ ಕರೆಗೆ ಉತ್ತರಿಸಲು ಬೈಕ್   ಪಕ್ಕಕ್ಕೆ ನಿಲ್ಲಿಸಿ ಮೊಬೈಲ್ ಕೈಗೆತ್ತಿಕೊಂಡು ಹಲೋ ಎಂದು ಹಿಂದಕ್ಕೆ ತಿರುಗಿದೆ , ಜಸ್ಟ್ ಕಣ್ ಕಣ್ಣ ಸಲಿಗೆ ಅಷ್ಟೇ. ಇದೇನು  ಕನಸೋ ಇಲ್ಲ ಭ್ರಮೆಯೋ ಒಂದು ಗೊತ್ತಾಗದ ಅಯೋಮಯ  ಸ್ಥಿತಿಯಲ್ಲಿ  ನಾನಿದ್ದೆ ,ಕಾರಣ ಎದುರಲ್ಲಿ ನೀನಿದ್ದೆ ..
ಹಲೋ ಹಲೋ ಎಂದು ಅತ್ತ ಕಡೆಯಿಂದ ಬಾಯಿ ಬಡಿದುಕೊಳ್ಳುತ್ತಿದ್ದ ಗೆಳೆಯನ ದನಿ ನನಗೆ ಕೇಳಿಸುತ್ತಿರಲಿಲ್ಲ .ಮೊಬೈಲ್ ಜೇಬಿಗೆ ತುರುಕಿದವನೇ ನಿನ್ನ ಪಕ್ಕದಲ್ಲಿ ಬಂದು ನಿಂತೆ .ಮಾತಿಲ್ಲ ಕಥೆಯಿಲ್ಲ .ಆರಂಬವಾದ ಪ್ರೀತಿ ಮುಂದುವರೆಯುವುದಾದರೂ  ಹೇಗೆ  ಎಂಬ ತಳಮಳದಲ್ಲಿ ತಲ್ಲಣಿಸುತ್ತಿದ್ದವನ  ಕೈಗೊಮ್ಮೆ

ನಿನ್ನ ಭುಜ ಅಕಸ್ಮಾತ್ ತಾಗಿದಂತಾಗಿ ನಿನ್ನತ್ತ ತಿರುಗಿದೆ ,ಸಾರಿ ಎಂಬ ಎರಡಕ್ಷರದ ದನಿಯಾ ಮೋಡಿಗೆ ಚಿತ್ತಾಗಿ ಹೋದೆ .ಹಾಗೆ ಸುಮ್ಮನೆ ಕಿರುನಗೆಯೊಂದನ್ನು ಎಸೆದು ಇನ್ನಷ್ಟು  ಹತ್ತಿರಕ್ಕೆ ಸರಿದೆ . ಬಿಗಿಯಾದ ಜೀನ್ಸ್  ಮೇಲೆ ಮರೂನ್ ಕಲರಿನ ಟಾಪ್ ಹಾಕಿಕೊಂಡು ಬೆನ್ನ ಮೇಲೆ ಹರವಿಕೊಂಡ
ರೇಷ್ಮೆಯಂಥ ಕೂದಲು ಮೆಲ್ಲಗೆ ಬೀಸುತ್ತಿದ್ದ ತಂಗಾಳಿಗೆ ಅತ್ತಿತ್ತ ಸರಿದಾಡುತ್ತಿದ್ದರೆ ಮನಸ್ಸು ತನ್ನಷ್ಟಕ್ಕೆ  ತಾನೆ ಹಾಡಲು ಶುರು ಮಾಡಿತ್ತು .ಸಣ್ಣಗೆ ಹನಿಯುತ್ತಿದ್ದ ಮಳೆ ಸ್ವಲ್ಪ ಸ್ವಲ್ಪವೇ ಜೋರಾಗುತ್ತಿದ್ದಂತೆ ನೀನು ಕಾಂಪ್ಲೆಕ್ಸಿನ ಮೆಟ್ಟಿಲುಗಳ ಕಡೆಗೆ  ಹೆಜ್ಜೆ ಇಡತೊಡಗಿದೆ.ಹತ್ತುತ್ತಿದ್ದ ಮೆಟ್ಟಿಲು ಎಡವಿ ತಡವರಿಸುತ್ತಿದ್ದವಳನ್ನು ಹಿಂದೆಯೇ ಇದ್ದ ನಾನು ಕೈ ಕೊಟ್ಟು ಹಿಡಿದುಕೊಂಡೆ .ಒಂದು ಕ್ಷಣ ನರನರವೂ ಕಂಪಿಸಿದಂತಾಯ್ತು ,ಥ್ಯಾಂಕ್ ಯು  ಎಂಬ ಮಾತು ಕೇಳಿ ಬದುಕೇ ಸಾರ್ಥಕವಾದಂತಾಯ್ತು.ತುಂತುರು ಮಳೆಯಲ್ಲಿ ಮಸುಕು ಮಸುಕು ಕತ್ತಲೆಯಲ್ಲಿ ನಾವಿಬ್ಬರು ಪರಿಚಯದ ಗೆಳೆಯ ಗೆಳತಿಯರಂತೆ ಒಂದಿಷ್ಟು ಮಾತಾಡಿಕೊಂಡೆವು .ನನ್ನ ಮನದಿಂಗಿತವನ್ನು ನಿನ್ನ ಮನಸ್ಸಿಗೆ ತಲುಪಿಸುವುದು ಹೇಗೆ ಎಂಬ ಯೋಚನೆಯಲ್ಲಿರುವಾಗಲೇ ಮಳೆ ನಿಂತಿತು ,ಮಾತು ಮುಗಿಯಿತು .

ಮತ್ತೆ ಸಿಗ್ತೀನಿ ಎಂಬ ಭರವಸೆಯನ್ನು ಕಣ್ಣಂಚಲಿ ತುಳುಕಿಸುತ್ತ (ನನಗೆ ಹಾಗೆನಿಸುತ್ತಿತ್ತು )ಬೈ ಎಂದು ಹೇಳಿ ನೀನು ಹೊರತು ಹೋದೆ .
ನಾಳೆ ಶಿವರಾತ್ರಿ ಹಬ್ಬದಂದು ಬಸವನ ಗುಡಿಯಾ ದೊಡ್ಡ ಗಣಪನ ಗುಡಿಗೆ ನೀನು ಬಂದೆ ಬರ್ತಿಯಾ  ಅಂತ ಗೊತ್ತು ,ಅಲ್ಲಿ ನಿನಗಾಗಿ ಬೆಟ್ಟದಷ್ಟು ಪ್ರೀತಿಯನ್ನು ಜೊತೆಯಲ್ಲಿ ಇಟ್ಟುಕೊಂಡು ನೀ ಬರುವ ದಾರಿಯಲಿ ಕಾಯ್ತಿರ್ತೀನಿ .ಕನಸಿಗೆ ಬಂದವಳು ನೀನು ,ಮನಸಿಗೂ ಬಂದು ಬಿಡು .ಹಾಗೆ ಹೆಗಲು ತಬ್ಬಿಕೊಂಡು ಮೌನಕ್ಕೆ ಶರಣಾಗೋಣ ,ಮನಸ್ಸುಗಳು ಮಾತಾಡಿಕೊಳ್ಳಲಿ .ಬರ್ತೀಯ ಆಲ್ವಾ ???

ನಿನ್ನ ನಿರೀಕ್ಷೆಯಲಿ ನಾನು ........

No comments:

Post a Comment