Friday, 25 May 2012

ಪ್ರೇಮ ಮತ್ತು ಹಸಿವು ಮಾತ್ರ ಮನುಷ್ಯನನ್ನು ಜೀವಂತಿಕೆಯಿಂದ ಇಡಬಲ್ಲವು.
ಮಳೆಯೆಂದರೆ
ಅವಳ ನೆನಪು
ಕಣ್ಣ ಹೊಳಪು
ಮೈಯ ಒನಪು
ಕಿಬ್ಬೊಟ್ಟೆ ಯಾಳದಲಿ
ಸಣ್ಣಗೆ ಕದಲುವ ನೋವು

ಮಳೆಯೆಂದರೆ

ಅರಳುವ ಆಸೆ
ಕೆರಳುವ ಕಾಮ
ಹರಿಯುವ ಬೆವರು
ಸುರಿದುಕೊಳ್ಳುವ ಸುಖ

ಮಳೆಯೆಂದರೆ

ಸುದೀರ್ಘ ರಾತ್ರಿ
ದಣಿಯದ ದೇಹ
ಮುಗಿಯದ ಕನಸು
ಪರವಶ ಮನಸು

ಮಳೆಯೆಂದರೆ

ಚಿಕ್ಕದೊಂದು ಸೋಲು
ಬಹು ದೊಡ್ಡ ಗೆಲುವು
ಅತೃಪ್ತ ಆಕಾಂಕ್ಷೆ
ಯುದ್ದ ಗೆದ್ದ ಅಹಂಕಾರ ....

ಮತ್ತು ಮಳೆಯೆಂದರೆ

ಅವಳ ತಿರುವುಗಳು
ಮತ್ತದೇ ಸೆಳವುಗಳು
ಹಸಿ ಹಸಿ ಬಯಕೆಗಳು
ಬಿಸಿ ಬಿಸಿ ನೆನಪುಗಳು

ಏಕಾಂತವನ್ನು
ಕೆಣಕುವ
ನಿನ್ನ ಹಲ್ಕಟ್ಟ ನಗೆಗೆ
ನನ್ನ ಅಂಗಾಂಗಗಳೆಲ್ಲ
ಪುಳಕಗೊಂಡಿವೆ
ನಾಳೆಗಿರಲಿ ಎಂದು
ಎತ್ತಿಟ್ಟುಕೊಂಡ ನನ್ನ
ಕೆಲವು ಕನಸುಗಳು
ಬದುಕು ಸಿಂಗಾರಗೊಂಡ
ಸಂಭ್ರಮದಲ್ಲಿ ಮರೆತೇ ಹೋಗಿವೆ
ನಿಸ್ತೇಜ ಕಣ್ಣುಗಳಲ್ಲಿ , ನಿಶಾಚರ ರಾತ್ರಿಗಳಲ್ಲಿ
ಸಿಕ್ಕು ,ಬಿಕ್ಕುವ ಏಕಾಂತದಲ್ಲಿ
ಗೆಳೆಯನಂತೆ ಆತುಕೊಂಡ
ಜೀವನ್ಮುಖಿ ಕನಸುಗಳು
ಸುಖದ ಕನವರಿಕೆಯಲಿ
ಕಳೆದೆ ಹೋಗಿವೆ
ಅಲ್ಲಲ್ಲಿ ಬಿದ್ದು ಇನ್ನೆಲ್ಲೋ ಎದ್ದು
ಒಂದಿಷ್ಟು ಪಡೆದು ,ಒಂದಿಷ್ಟು ಕಳೆದು
ನಿರ್ಲಿಪ್ತವಾಗುವ ಮುನ್ನ ಮನಸು
ಕೈ ಹಿಡಿದು ಕಾಪಾಡಿದ ಕನಸುಗಳು
ಮಾತಿಲ್ಲದೆ ಮರೆಯಾಗಿವೆ

Wednesday, 7 March 2012

ಇವಳಪ್ಪುಗೆಯಲ್ಲಿ
ಸುಖಿಸುವಾಗಲೆಲ್ಲ
ಅವಳ
ನೆನಪುಗಳು
ಮರುಕಳಿಸುತ್ತವೆ ..
ಹಿಂದಿನ ರಾತ್ರಿ
ಅವರುಗಳು ಸುಖಿಸಿದ
ಗುರುತುಗಳನ್ನು
ಬೆಳಗಿನ
ನಾಜೂಕು ಗಾಳಿ ಸದ್ದಿಲ್ಲದೇ
ಗುಡಿಸುತ್ತಿದೆ
ಈಗಷ್ಟೇ ಮಂಪರಿನಿಂದ
ಎಚ್ಚೆತ್ತ ಸೋಮಾರಿ ನಗರ
ಮತ್ತೆ ರಾತ್ರಿಗೆ ಕಾಯುತ್ತಿದೆ
ಈ ರೊಟೀನು ಚಕ್ರಕ್ಕೆ
ಸಿಕ್ಕ ಮನುಷ್ಯನ ಆತ್ಮ
ಸತ್ತು ಯಾವುದೋ ಕಾಲವಾಗಿದೆ ..
ಇಲ್ಲಿ ಕಾಲವೂ
ಉಸಿರು ಬಿಗಿ
ಹಿಡಿದು ಚಲಿಸುತ್ತದೆ
ಅದೆಷ್ಟೋ ನಿಟ್ಟುಸಿರುಗಳ
ಯಾತನೆಗೆ ಮರುಗಿ
ಒಮ್ಮೊಮ್ಮೆ
ನಿಂತೇ ಬಿಡುತ್ತದೆ
ಹಸಿ ಹಸಿ ಕಾಂಕ್ಷೆಗಳ
ಬಿಸಿಗೆ ಸಿಕ್ಕು
ಅರೆ ಸತ್ತ ಭ್ರೂಣಗಳಿಗೆ
ಸಾಕ್ಷಿಯಾಗಿ
ಈಗ ಎಲ್ಲವೂ
ಎಂದಿನಂತೆ
ಹೊಸ ಮುಖಗಳಲ್ಲೂ
ಹಳೆಯ ಸುಖದ
ಕನವರಿಕೆ
ಅವರೀಗ
ನಾಳೆಗೆ ಕಾಯುವುದಿಲ್ಲ
ಆಕಾಶ ದಿಟ್ಟಿಸುತ್ತ
ಅವಕಾಶ ಹುಡುಕುವುದಿಲ್ಲ
ಕೆನ್ನೆಯ ಮೇಲೆ ಕಣ್ಣೀರ ಗುರುತೆಲ್ಲ
ಕರಗಿ ಅಗ್ಗದ ನಗುವಿಗೆ
ಒಗ್ಗಿ ಹೋಗಿದ್ದಾರೆ
ಬಜಾರಿನ ಬಯಕೆಗಳು
ಬರಿದಾಗುವ ತನಕ
ಕಾಲವೂ
ಅವರಿಗೆ ಜೊತೆ ನೀಡುವ
ಮಾತು ಕೊಟ್ಟಿದೆ .

Friday, 2 March 2012

ನೀನು ಒಳಗೆ ಬರೋದಾದ್ರೆ
ಈ ಹೃದಯದ ಬಾಗಿಲಿಗೆ
ಆ ಚಂದ್ರನನ್ನೇ ತೋರಣ
ಮಾಡಿ ಕಟ್ತೀನಿ
ಖಾಯಮ್ಮಾಗಿ ಒಳಗೆ
ಇರೋದಾದ್ರೆ
ನಿನ್ ಬದುಕಲ್ಲಿ ಯಾವತ್ತು
ಅಮಾವಾಸ್ಯೆ ಬರದಂಗೆ
ನೋಡ್ಕೋತೀನಿ